ಬೆಂಗಳೂರು: ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬುಧವಾರ ಘೋಷಣೆ ಮಾಡಿದ್ದಾರೆ.

ಸಹಕಾರಿ ಸಂಘಗಳಲ್ಲಿ ಜೂನ್ 20 ವರೆಗೆ ಸಾಲ ಪಡೆದಿರುವ ರೈತರ ಸಾಲ ಮನ್ನಾವಾಗಲಿದೆ. ರೈತರು ಪಡೆದ ಸಾಲದಲ್ಲಿ ಗರಿಷ್ಠ 50 ಸಾವಿರ ರೂಪಾಯಿವರೆಗಿನ ಸಾಲ ಮನ್ನಾವಾಗಲಿದೆ.

ಸಾಲ ಮನ್ನಾ ಘೋಷಣೆಯಿಂದ 22.27 ಲಕ್ಷ ರೈತರಿಗೆ ಅನುಕೂಲವಾಗಲಿದ್ದು ಇದರಿಂದ ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇದು ಅಲ್ಪಾವಧಿ ಅಥವಾ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡಲಾಗಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಕ್ಕೆ ಈ ಸಾಲಮನ್ನಾ ಅನ್ವಯಿಸುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ

ಸಿದ್ದರಾಮಯ್ಯ ಸರಕಾರದ ಸಾಲ ಮನ್ನಾಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ‘ಮುಂದಿನ ಸರಕಾರಕ್ಕೆ ಹೊರೆ ಉಳಿಸಿ ಹೋಗುವುದು ಬೇಡ. ಈ ಸರಕಾರದ ಅವಧಿಯಲ್ಲೇ ಬ್ಯಾಂಕುಗಳಿಗೆ ಹಣ ಪಾವತಿಸಲಿ,’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಹಿನ್ನಲೆಯಲ್ಲಿ ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ರೈತರ ಸಾಲ ಮನ್ನಾ ನಿರ್ಧಾರ ತೆಗೆದುಕೊಂಡಿರುವುದ ಸ್ವಾಗತಾರ್ಹ. ಆದರೆ ಇದಕ್ಕಾಗಿ ಸರಕಾರ ಹಿಗ್ಗುವ ಅಗತ್ಯವಿಲ್ಲ. ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ನಮ್ಮ ಒತ್ತಾಯಗಳಿಗೆ ಸಿದ್ದರಾಮಯ್ಯ ಮಣಿದಿದ್ದಾರೆ,’ ಎಂದು ಅವರು ಹೇಳಿದ್ದಾರೆ

ಇದೇ ವೇಳೆ ಸಾಲ ಮನ್ನಾ ನಿರ್ಧಾರ ಸ್ವಾಗತಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕೇಂದ್ರವೂ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ‘ರೈತರ ಸಾಲಮನ್ನಾ ಸ್ವಾಗತಾರ್ಹ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ 1-2 ಲಕ್ಷವರೆಗಿನ ಸಾಲ ಮನ್ನಾ ಮಾಡಿದ್ದರೆ ನಮ್ಮಲ್ಲಿ ಕೇವಲ 50,000 ರೂಪಾಯಿವರೆಗಿನ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಸರಕಾರ ಸಾಲ ಮನ್ನಾದ ಮಿತಿ ಹೆಚ್ಚಿಸಲಿ,’ ಎಂದಿದ್ದಾರೆ. ಕರ್ನಾಟದಲ್ಲಿ ಸಹಕಾರಿ ಬ್ಯಾಂಕುಗಳ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಕೇಂದ್ರ ಸರಕಾರವೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಸರಕಾರದ ಸಾಲಮನ್ನಾ ಸ್ವಾಗತಾರ್ಹ. ಆದರೆ ಇದಕ್ಕೆ ಸರಕಾರ ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಸಾಲ ಮನ್ನಾಕ್ಕೆ ನಾವೂ ಒತ್ತಾಯಿಸಿದ್ದೆವು. ಈಗ ಕೇಂದ್ರ ಸರಕಾರ ಸಾಲ ಮನ್ನಾ ಮಾಡಲಿ,’ ಎಂಬುದು ಜೆಡಿಎಸ್ ನಾಯಕ ಎನ್.ಎಚ್ ಕೋನರೆಡ್ಡಿ ಹೇಳಿಕೆ. ಈ ಕುರಿತು ಬಿಜೆಪಿಗೆ ಹೆಚ್ಚಿನ ಜವಾಬ್ದಾರಿ ಇದೆ. ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಈ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳೂ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.