ಕುರಿಗಾಯಿ ಕೃಷ್ಣೇಗೌಡರ ಯಶೋಗಾಥೆ |

0 Comments

Kurubas.co.in
Photo and Detials Send By Aanand Degganahalli

ಬಂಡೂರು ಕುರಿ ಸಾಗಾಣಿಕೆಯಲ್ಲಿ ಪರಿಣತಿ ಹೊಂದಿರುವ ಕೃಷ್ಣೇಗೌಡರದ್ದು ವರ್ಣರಂಜಿತ ವ್ಯಕ್ತಿತ್ವ. ಎಂ.ಎ ಪದವೀಧರರಾದರು ಸಾಮಾನ್ಯ ರೈತರಾಗಿ ಕೋಲು ಹಿಡಿದು ಈ ಇಳಿವಯಸ್ಸಿನಲ್ಲೂ ಕುರಿ ಮೇಯಿಸಲು ಹೋಗುವುದು ನೋಡುವುದೆ ಚೆಂದ. ತಾಲೂಕಿನ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವವರಾದರು ಹಮ್ಮು ಬಿಮ್ಮು ತೋರದ ಸರಳ ವ್ಯಕ್ತಿ.
ಬಾಲ್ಯ ಮತ್ತು ವಿದ್ಯಾಭ್ಯಾಸ :- ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚೋಳೇನಹಳ್ಳಿ ಗ್ರಾಮದ ಕುರುಬ ಸಮುದಾಯದ ರೈತ ದಂಪತಿಗಳಾದ ಕೆಂಪಮ್ಮ ಮತ್ತು ಕಳಸೇಗೌಡರ ಮೂರನೆ ಮಗನಾಗಿ ೧೯೫೦ರಲ್ಲಿ ಜನಿಸಿದರು. ಗೌಡರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೆ.ಆರ್.ನಗರ ಪಟ್ಟಣದಲ್ಲಿ ಪಡೆದರು. ಪಕ್ಜದ ಕಾಳೇನಹಳ್ಳಿ ಗ್ರಾಮದ ಅತ್ತೆಯ ಮನೆಯಲ್ಲಿ ಉಳಿದುಕೊಂಡಿದ್ದರು‌. ಪ್ರೌಢಶಿಕ್ಷಣವನ್ನು ಬಿಳಿಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪಡೆದರು, ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ(ರಾಜ್ಯಶಾಸ್ತ್ರ) ಪದವಿ ಪಡೆದು ಊರಿಗೆ ಹಿಂದಿರುಗಿದರು. ಅಂದು ಈಗಿನಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯವಿಲ್ಲದ ಕಾರಣ ಸರ್ಕಾರಿ ಕೆಲಸದಿಂದ ವಂಚಿತರಾದರು ಧೃತಿಗೆಡದೆ ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ ತೊಡಗಿದರು.

ತೆರೆಮರೆಯ ನಾಯಕ :-
ಗೌಡರ ಜೊತೆಗೆ ಓದಿದ ಆತ್ಮೀಯ ಸ್ನೇಹಿತರು ಶಾಸಕರು, ಸಚಿವರು, ಮುಖ್ಯಮಂತ್ರಿಯಾಗಿದ್ದರು ಯಾರ ಬಳಿಯೂ ಹೋಗದ ಸ್ವಾಭಿಮಾನಿ. ಒಮ್ಮೆ ಅನಿವಾರ್ಯವಾಗಿ ಒಂದು ಸಹಾಯ ಕೇಳಲು ಸ್ನೇಹಿತನ ಕಚೇರಿಗೆ ಹೋದಾಗ ನಿರ್ಲಕ್ಷಿಸಿ ಮಾತನಾಡಿದ ಸ್ನೇಹಿತನನ್ನು ದೂಷಿಸದೆ ಅವರ ಎದೆಗಾರಿಕೆ ಹೊಗಳುವ ಗೌಡರು ಸ್ನೇಹಜೀವಿ. ಒಮ್ಮೆ ತನ್ನೂರಿನ ಡೈರಿ ಮುಚ್ಚುವ ಹಂತಕ್ಕೆ ಬಂದಾಗ ಲಾಭ ಬರುತ್ತಿದ್ದ ಹೋಟೆಲ್ ವರ್ತನೆಗೆ ಹಾಕುತ್ತಿದ್ದ ಹಾಲು ನಿಲ್ಲಿಸಿ ಡೈರಿಗೆ ಹಾಕಿದರಂತೆ. ಮುಂದೆ ಡೈರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಮ್ಮೆಗೌಡನಕೊಪ್ಪಲು ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ, ಒಂದು ಬಾರಿ ಹುಣಸೂರು ತಾಲೂಕಿನ ಟ್ರಿಬನಲ್ ಮೆಂಬರ್ ಆಗಿದ್ದರು. ತನ್ನೂರಿನಿಂದ ಸತತ ೪ ಬಾರಿ(೨೦ ವರ್ಷ) ಬೋಳನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹುಣಸೂರು ತಾಲೂಕಿನ ಕುರುಬರ ಸಂಘದ ಸಂಘಟನೆಯಲ್ಲಿಯೂ ಗೌಡರು ದುಡಿದಿದ್ದಾರೆ. ಅಂದಿನ ಕಾಲದಲ್ಲಿಯೆ ೨೫೦೦ ರೂ ದೇಣಿಗೆ ಸಂಗ್ರಹಿಸಿ ನೀಡಿದರಂತೆ. ಗೌಡರೆ ಹೇಳುವಂತೆ “ಇದು ನೀಡಿದ ಕೈ, ಬೇಡಿದ ಕೈಯಲ್ಲ” ಎನ್ನುವ ಪದಕ್ಕೆ ಅನ್ವರ್ಥವಾಗಿ ಬದುಕುತ್ತಿದ್ದಾರೆ.

ಸಮಾಜಸೇವೆ :-
ಗೌಡರು ಮಹಾನ್ ದೈವಭಕ್ತ. ಕನಕದಾಸರ ಅನುಯಾಯಿ. ಚೋಳೇನಹಳ್ಳಿ ಗ್ರಾಮದ ದೊಡ್ಡಮ್ಮ ದೇವಿಯ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಹಗಲಿರುಳು ದುಡಿದ ಕೈ ಇವರೆ. ಚೋಳೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಗೌಡರ ಶ್ರಮ ಅಪಾರ, ಮುಖ್ಯ ಶಿಕ್ಷಕಿ ಪದ್ಮಾವತಿಯವರ ಜೊತೆಗೂಡಿ ಸುವರ್ಣಮುಖಿ ಸಂಸ್ಕೃತಿಧಾಮ ಮಾಲಿಕರಾದ ಡಾ. ಅಮೇರಿಕ ನಾಗರಾಜ್ ಅವರ ಸಹಾಯ ಪಡೆದು ಒಸಾಟ್(ಯು.ಎಸ್.ಎ) ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ರೋಟರಿ ಮೈಸೂರು ಸಹಾಯಧನದಿಂದ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಸುಧೀರ್ಘ ಸಮಾಜಸೇವೆ ಹಾಗೂ ರಾಜಕೀಯದಲ್ಲಿ ಶುದ್ಧಹಸ್ತರಾದ ಕಾರಣ ತನ್ನ ಪಾಲಿಗೆ ಪಿತ್ರಾರ್ಜಿತವಾಗಿ ಬಂದಿದ್ದ  ಐದು ಎಕರೆ ತೋಟವನ್ನು ಕಳೆದುಕೊಳ್ಳುವಂತಾಯ್ತು.

ಕೈ ಹಿಡಿದ ಕುಲ ಕಸುಬು :-
ಕೃಷ್ಣೇಗೌಡರು ನಂಬಿದ ವ್ಯಕ್ತಿಗಳು ಅವರನ್ನು ಕೈಬಿಟ್ಟರು ಅವರ ಕೈ ಹಿಡಿದಿದ್ದು ಕುಲಕಸುಬು ಕುರಿ ಸಾಕಾಣಿಕೆ ” ಕುರಿ ಸಾಕಿ ಕುಬೇರರಾಗಿ” ಎಂಬ ಮಾತಂತೆ ಬಂಡೂರು ಕುರಿ ಸಾಗಾಣಿಕೆಯಲ್ಲಿ ನೈಪುಣ್ಯತೆ ಹೊಂದಿದ್ದ ಗೌಡರು ಅದೇ ವೃತ್ತಿಯನ್ನು ಮುಂದುವರೆಸಿದರು. ಮೊದಲಿಗೆ ಸ್ವಲ್ಪಮಟ್ಟಿಗೆ ತೊಂದರೆ ಆದರು ನಂತರ ಹಂತ ಹಂತವಾಗಿ ಯಶಸ್ವಿಯಾದರು. ಸದ್ಯ ಬಿಳಿಕೆರೆ ಎಸ್.ಬಿ.ಐ ಬ್ಯಾಂಕಿನ ನೆರವಿನಿಂದ ೧೦೦ ಕುರಿಗಳು, ಒಂದು ಸುಸಜ್ಜಿತವಾದ ಘಟಕ, ಕುರಿಗಳ ಮೇವಿಗಾಗಿ ೧. ೧/೨ ಎಕರೆ ತೋಟ, ಕುರಿಗಳು ಮೇಯಲು ಸುಮಾರ ೧೪ ಎಕರೆ ಜಮೀನನ್ನು ಗುತ್ತಿಗೆ ಪಡೆದಿದ್ದಾರೆ. ಅವರ ಶ್ರಮವನ್ನು ಗುರುತಿಸಿದ  ‘ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ’
ಕೆ.ಆರ್.ನಗರ ತಾಲೂಕು ಘಟಕವು ೨೦೧೬ನೇ ಸಾಲಿನ ‘ಕಾಯಕಯೋಗಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಪ್ರಶಸ್ತಿ ಮೊತ್ತ ೨೫೦೦೦ ರೂಗಳನ್ನು  ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡಿ ಎಂದು ಹಿಂದಿರುಗಿದ್ದಾರೆ.
ಕುಟುಂಬ:- ಕೃಷ್ಣೇಗೌಡರ ಕುಟುಂಬದಲ್ಲಿ ಪತ್ನಿ ಪಾರ್ವತಮ್ಮ ಇಬ್ಬರು ಮಕ್ಕಳು, ಮಗಳನ್ನು ಮೈಸೂರು ಪಕ್ಕದ ಹುಯಿಲಾಳು ಗ್ರಾಮ ಗುತ್ತಿಗೆದಾರರಾದ ಕಾಳೇಗೌಡರಿಗೆ ಮದುವೆ ಮಾಡಿದ್ದಾರೆ. ಮಗ ಲಂಕೇಶ್, ಸೊಸೆ ಹೇಮಾವತಿ, ಮೊಮ್ಮಕ್ಕಳು ಪುಷ್ಕರಣಿಗೌಡ, ದರ್ಶಿನಿಗೌಡ
ಜೊತೆಯಲ್ಲಿದ್ದಾರೆ.

ತಂದೆಯ ಹಾದಿಯಲ್ಲಿ ಮಗ ಲಂಕೇಶ್:-
ಎಸ್.ಎಸ.ಎಲ್.ಸಿ ವಿದ್ಯಾಭ್ಯಾಸ ಮುಗಿಸಿದ ಲಂಕೇಶ್ ೧೯೯೨ರಲ್ಲಿ ಕಾಗಿನೆಲೆ ಮಹಾಸಂಸ್ಥಾನ ಮಠ ಸ್ಥಾಪನೆಯಾದಗಿನಿಂದ ಮಠದ ಸೇವೆಯಲ್ಲಿ ತೊಡಗಿದರು. ೧೯೯೨ ರಿಂದ ೯೫. ಶ್ರೀ ಬೀರೇಂದ್ರ ಕೇಶವ ತಾರಕನಂದಾ ಪುರಿ ಸ್ವಾಮಿಗಳ ಸೇವೆಯಲ್ಲಿದ್ದ ಲಂಕೇಶರು, ೧೯೯೫ ರಿಂದ ೧೯೯೭ರ ವರೆಗೆ ಕೆ.ಆರ್.ನಗರ ಕಾಗಿನೆಲೆ ಶಾಖಾಮಠದಲ್ಲಿ ಸೇವೆ ಸಲ್ಲಿಸಿದರು. ನಂತರ ೧೯೯೭ ರಿಂದ ಕಲ್ಬುರ್ಗಿ ವಿಭಾಗ, ತಿಂಥಿಣಿ ಬ್ರೀಡ್ಜ್ ಕಾಗಿನೆಲೆ ಶಾಖಾಮಠದ ಶ್ರೀ ಸಿದ್ದರಾಮನಂದಾ ಸ್ವಾಮಿಗಳ ಸೇವೆಯಲ್ಲಿದ್ದರು. ಮನೆಯ ಸಂಕಷ್ಟ ಅರಿತು ಮಠದ ಕೆಲಸ ತೊರೆದು ತಂದೆಗೆ ನೆರವಾಗಿದ್ದಾರೆ. ಬಿಳಿಕೆರೆ ಭಾಗದ ರೈತರನ್ನು ಸಂಘಟಿಸಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಎರಡನೆ  ಮಗಳು ದರ್ಶಿನಿ ಕಾಗಿನೆಲೆ ಮಹಾಸಂಸ್ಥಾನ ತಿಂಥಿಣಿ ಬ್ರೀಡ್ಜ್ ಮಠದಲ್ಲಿ ವ್ಯಾಸಂಗ ಮಾಡಿದರೆ. ಮೊದಲ ಮಗಳು ಪುಷ್ಕರಣಿ ರಾಯಚೂರಿನಲ್ಲಿ ದ್ವಿತೀಯ ಪಿ.ಯು.ಸಿ ಕಲಿಯುತ್ತಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ  ೬೧೧ ಅಂಕ ಪಡೆದ ಇವರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಲು ಆಹ್ವಾನವನ್ನು ಕೊಟ್ಟರು, ” ನಾನು ಸನ್ಮಾನ ಮಾಡಿಸಿಕೊಳ್ಳುವಂತಹ ದೊಡ್ಡ ಸಾಧನೆ ಮಾಡಿಲ್ಲ, ಮುಂದೆ ಸಾಧಿಸಿದರೆ ಬರುವೆ ” ಎಂದು ನಯವಾಗಿ ತಿರಸ್ಕರಿಸಿ ತಾತನ ಹಾದಿಗೆ ಮೊದಲ ಹೆಜ್ಜೆ ಊರಿದ್ದಾರೆ….

– ದೆಗ್ಗನಹಳ್ಳಿ ಆನಂದ್,
                   ಯುವ ಬರಹಗಾರರು
                    ಕೆ.ಆರ್.ನಗರ

Leave a Reply

Your email address will not be published. Required fields are marked *